ಬೀದರ್: ಕಳ್ಳತನ ಮಾಡಿ.. ದುಡ್ಡು ವಾಪಸ್ ಕೊಡ್ತೀನಿ ಅಂತಾ ಹೇಳಿದ್ರೆ ರಕ್ಷಣೆ ಕೊಡ್ತೀನಿ ಎನ್ನೋದು ಎಷ್ಟರಮಟ್ಟಿಗೆ ಸರಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
12 ವರ್ಷದ ದ್ವೇಷದಿಂದ ಮತ್ತೆ ಜೈಲಿಗೆ ಕಳುಹಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ, ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಳ್ಳರಿಗೆ ರಕ್ಷಣೆ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು, ಈ ರಾಜ್ಯದಲ್ಲಿ ಎಷ್ಟೇ ಬಲಾಡ್ಯರು ಆಗಿದ್ದರೂ ತಪ್ಪಿತಸ್ಥರು ಅಂತಾದರೆ ಕಾನೂನಿನ ಅನ್ವಯ ಯಾರಿಗೂ ರಕ್ಷಣೆ ನೀಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಅಧಿಕಾರಿಗಳು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ ಎಂದರು.
ಮುಂದುವರೆದು ಮಾತನಾಡಿದ ಅವರು, ದ್ವೇಷದ ರಾಜಕೀಯ ನಾನು ಮಾಡ್ತಿಲ್ಲ. ದ್ವೇಷದ ರಾಜಕೀಯ ಮಾಡಬೇಕು ಅಂದಿದ್ರೆ ನಾನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಮಾಡ್ತಿದ್ದೆ. ನಾನು ಅಷ್ಟು ಕೀಳುಮಟ್ಟಕ್ಕೆ ಇಳಿಯೋದಿಲ್ಲ ಎಂದು ಜನಾರ್ಧನ ರೆಡ್ಡಿಗೆ ತಿರುಗೇಟು ನೀಡಿದ್ದಾರೆ.
ಅ್ಯಂಬಿಡೆಂಟ್ ಡೀಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕೊಳಗಾಗಿದ್ದ ರೆಡ್ಡಿ, ಬಿಡುಗಡೆಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ‘ಸಿಎಂ ಕುಮಾರಸ್ವಾಮಿ ಷಡ್ಯಂತ್ರ ರೂಪಿಸಿ ನನ್ನ ಬಂಧನವಾಗುವಂತೆ ಮಾಡಿದ್ದಾರೆ. 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ 150 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದೆ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು 12 ವರ್ಷಗಳ ಬಳಿಕ ದ್ವೇಷ ಸಾಧಿಸಿ, ನನ್ನನ್ನು ಬಂಧಿಸಿ ಅಪಮಾನ ಮಾಡಿದ್ದಾರೆ ಎಂದು ಜನಾರ್ಧನ್ ರೆಡ್ಡಿ ಆರೋಪಿಸಿದ್ದರು.