ಬೆಂಗಳೂರು: ಭೂಗತ ಜಗತ್ತೇ ಅಂಥದ್ದು, ಅಲ್ಲಿ ಅಡಿಗಡಿಗೂ ಸಾವಿನ ವಿರುದ್ಧ ಸರಸ-ವಿರಸ. ಹೀಗೆ ಸದಾ ಸಾವಿನ ಸನಿಹವೇ ಇದ್ದ ಒಂದು ಕಾಲದ ಭೂಗತ ಪಾತಕಿ, ಮುಂಬೈ ಮತ್ತು ಬೆಂಗಳೂರಿನ ಭೂಗತ ಜಗತ್ತನ್ನು ಆಳಿದ ದೊರೆ ಮುತ್ತಪ್ಪ ರೈ ಸಾಯುವ ಮುನ್ನವೇ ಸಾವಿನ ಸುಳಿವು ನೀಡಿದ್ದರು.
ಮುತ್ತಪ್ಪ ರೈ ಭೂಗತಲೋಕ ಸಾಕಾಗಿ, ಸುಸ್ತಾಗಿ, ಕಡೆಗೆ ಸಾರ್ವಜನಿಕ ಸೇವೆಯ ಸೋಗು ಧರಿಸಿದರು. ಜಯಕರ್ನಾಟಕ ಎಂಬ ಸಂಘಟನೆ ಕಟ್ಟಿದರು. ಬಹುಕಾಲ ಮುಂಬೈನಲ್ಲಿದ್ದ ಅವರಿಗೆ ಭೂಗತಲೋಕ ಸಾಕಾಗುತ್ತಿದ್ದಂತೆ ಕನ್ನಡಮ್ಮ ನೆನಪಾದಳು. ಮುಂಬೈನಲ್ಲಿ ಶಿವಸೇನೆ ಮರಾಠಿ ಅಸ್ಮಿತೆ ಹೆಸರಿನಲ್ಲಿ ಮಾಡಿದ್ದೆಲ್ಲವನ್ನೂ ಕಣ್ಣಾರೆ ಕಂಡಿದ್ದ ಮುತ್ತಪ್ಪ ರೈಗೆ ಹಾಯಾಗಿ ಬೆಂಗಳೂರಿನಲ್ಲಿ ಬದುಕಲು ಇಂಥದೊಂದು 'ಭಾವನಾತ್ಮಕ ಊರುಗೋಲು' ಬೇಕಾಗಿತ್ತು.
ಜಯಕರ್ನಾಟಕದ ಮೂಲಕ ರಾಜಕಾರಣ ಪ್ರವೇಶದ ಆಸೆಯೂ ಇತ್ತು. ಆದರೆ ಜಯಕರ್ನಾಟಕ ಸಂಘಟನೆಗೆ ಅಪಜಯವಾಗಿಬಿಟ್ಟಿತು. ಭೂಗತಲೋಕ ಬಿಟ್ಟು ಬಿಡದಿ ಬಳಿ ಬಿಂದಾಸಾಗಿ ಬದುಕಬೇಕೆಂದುಕೊಂಡರೂ 'ಮಳೆ ನಿಂತರೂ ಹನಿ ನಿಲ್ಲದ...' ರೀತಿಯಂತಾಗಿತ್ತು. ನಡುವೆ ಕ್ರೂರಿ ಕ್ಯಾನ್ಸರ್ ಕಾಡತೊಡಗಿತು. ಆಗಲೇ ಮುತ್ತಪ್ಪ ರೈ ಇನ್ನಷ್ಟು ನಿತ್ರಾಣರಾಗಿದ್ದು, ಆಗಲೇ ತಮ್ಮ ಸಾವಿನ ಸುಳಿವುಗಳನ್ನು ನೀಡುತ್ತಾ ಬಂದಿದ್ದು. ಅದು ಒಂದಲ್ಲ, ಎರಡಲ್ಲ, ಹಲವು ಬಾರಿ.
ಇತ್ತೀಚೆಗೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುತ್ತಪ್ಪ ರೈ, 'ನನಗೆ ಕ್ಯಾನ್ಸರ್ ಇದೆ' ಎಂದು ಬಹಿರಂಗವಾಗಿ ಒಪ್ಪಿಕೊಂಡರು. ಅಷ್ಟೇಯಲ್ಲ, 'ನನ್ನ ಟಿಕೆಟ್ ಕನ್ಫರ್ಮ್ ಆಗಿದೆ' ಎಂದು ತಾವು ಸಾವಿನ ಪಕ್ಕದ ಮನೆಯಲ್ಲೇ ಇದ್ದೇನೆ ಎಂದು ಹೇಳಿದರು. 'ಓಕೆ ಎಂದಾಗ ಹೋಗಬೇಕು' ಎಂದು ಹೇಳುವ ಮೂಲಕ ಜೀವನ ಪಯಣ ಮುಗಿಸಲು ಅಣಿಯಾಗಿರುವುದಾಗಿಯೂ ತಿಳಿಸಿದ್ದರು.
ಇದಲ್ಲದೆ ಇತ್ತೀಚೆಗೆ ಮುತ್ತಪ್ಪ ರೈ ಸತ್ತಿದ್ದಾರೆ ಎಂಬ ಸುದ್ದಿ ಬಹಳಷ್ಟು ಬಾರಿ ಕೇಳಿಬಂದಿತ್ತು. ಲಾಕ್ಡೌನ್ ಶರುವಾದ ಮೇಲೆ ಸ್ವತಃ ಮುತ್ತಪ್ಪ ರೈ 'ನಾನು ಲಾಕ್ಡೌನ್ ವೇಳೆ ಮೃತಪಟ್ಟರೆ ಹೆಚ್ಚು ಜನ ಸೇರಿ ತೊಂದರೆ ಕೊಡಬೇಡಿ’ ಎಂದ ಆಪ್ತರ ಬಳಿ ಹೇಳಿಕೊಂಡಿದ್ದರು.
ಇದೇ ರೀತಿ ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದ ಮುತ್ತಪ್ಪ ರೈ ಇತ್ತೀಚೆಗೆ ತಮ್ಮ ಆಪ್ತರ ಬಳಿ ಸಾವಿನ ಸುಳಿವನ್ನೂ ನೀಡುತ್ತಲೇ ಇದ್ದರು. ಇದೇ ಏಪ್ರಿಲ್ 30ರಂದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗಿನ ಜಾವ 2.30ರ ಸುಮಾರಿಗೆ ಮುತ್ತಪ್ಪ ರೈ ಮೃತಪಟ್ಟಿದ್ದಾರೆ.