ಬೆಂಗಳೂರು: ನಾಲ್ಕನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕ್ಯಾಮೆರಾ ಮುಂದೆ ಯೋಗಾಭ್ಯಾಸ ಮಾಡಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ನರೆದ್ರ ಮೋದಿ ಅವರು ಹಾಕಿದ್ದ ಫಿಟ್ನೆಸ್ ಚಾಲೆಂಜ್'ಗೆ ಈ ಮೂಲಕ ಉತ್ತರ ನೀಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ತಮ್ಮ 87ರ ಇಳಿವಯಸ್ಸಿನಲ್ಲೂ ಯೋಗ ಪ್ರದರ್ಶನ ನೀಡುವ ಮೂಲಕ ಯುವ ಜನಾಂಗವನ್ನು ನಾಚುವಂತೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮಗಾಂಧೀಜಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಸೇರಿದಂತೆ ಮಹಾಪುರುಷರೆಲ್ಲರೂ ಕೂಡ ಯೋಗ ಸಾಧಕರಾಗಿದ್ದರು. ಯೋಗ, ಆಸನಗಳನ್ನು ಮಾಡುವ ಪದ್ಧತಿ ಅನಾದಿ ಕಾಲದಿಂದ ಇದ್ದರೂ ಕೂಡ ಮೋದಿಯವರು ಅದಕ್ಕೆ ಒಂದು ಸ್ವರೂಪ ನೀಡಿದ್ದಾರೆ. ವಿಶ್ವಮಟ್ಟದಲ್ಲಿ ಯೋಗ ದಿನ ಆಚರಿಸುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
87 ವರ್ಷವಾದರೂ ಉತ್ಸಾಹದಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ದೇವೇಗೌಡ ಆರೋಗ್ಯದ ಗುಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಯಾನ್ಸರ್, ಹೃದಯ ಸಂಬಂಧಿ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಯೋಗಾಭ್ಯಾಸದಿಂದ ಗುಣಮುಖವಾಗುವ ಸಾಧ್ಯತೆಗಳಿವೆ. ತಾವು 23ನೇ ವಯಸ್ಸಿನಲ್ಲಿ ಕಂಟ್ರಾಕ್ಟರ್ ಕೆಲಸ ಶುರು ಮಾಡಿದ್ದು, ಆಗ ಬೆಳಗ್ಗೆ 5ರಿಂದ ಸೈಕಲ್ ತುಳಿಯುತ್ತಿದ್ದೆ. 70ರಿಂದ 80 ಕಿ.ಮಿ. ಸೈಕಲ್ ತುಳಿಯುತ್ತಿದ್ದೆ. ಇದಕ್ಕಿಂತ ವ್ಯಾಯಾಮ ಬೇಕೆ ಎಂದು ಪ್ರಶ್ನಿಸಿದರು. ಮೊದಲಿನಿಂದಲೂ ತಾವು ಶ್ರಮ ಜೀವಿಯಾಗಿದ್ದು, ಮಿತ ಆಹಾರ ಸೇವಿಸುವುದು ತಮ್ಮ ಆರೋಗ್ಯದ ಗುಟ್ಟು ಎಂದು ಹೇಳಿದರು.