ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ, ಗಾಲಿ ಜನಾರ್ದನ ರೆಡ್ಡಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ರೆಡ್ಡಿಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, 48 ಗಂಟೆಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.
ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುಳಿವೂ ಸಿಗದಂತೆ ತಲೆಮರೆಸಿಕೊಂಡಿರುವ ಜನಾರ್ಧನ ರೆಡ್ಡಿಗಾಗಿ ಹೈದರಾಬಾದ್ ನಲ್ಲಿಯೂ ಸಿಸಿಬಿ ಮತ್ತು ಹೈದರಾಬಾದ್ ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ. ಒಟ್ಟು 15 ಜನರ ಮೊಬೈಲ್ ನಂಬರ್ನ ಮೇಲೆ ಸಿಸಿಬಿ ಕಣ್ಣಿಟ್ಟಿದ್ದು, ಅವರ ಜೊತೆ ಸಂಪರ್ಕಕ್ಕೆ ಬರಬಹುದೆಂಬ ಶಂಕೆಯಲ್ಲಿ ತಂಡ ಕಾರ್ಯಪ್ರವೃತ್ತವಾಗಿದೆ.
ಮತ್ತೊಂದೆಡೆ ಬಂಧನದಿಂದ ತಪ್ಪಿಸಿಕೊಳ್ಳಲು ಜನಾರ್ದನ ರೆಡ್ಡಿ ಪರ ವಕೀಲ ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ನೀರಿಕ್ಷಣಾ ಜಾಮೀನು ಸಿಗುವವರೆಗೂ ಜನಾರ್ಧನರೆಡ್ಡಿ ವಿಚಾರಣೆಗೆ ಹಾಜರಾಗುವುದಿಲ್ಲ ಎನ್ನಲಾಗಿದೆ.
ಈಗಾಗಲೇ ಜನಾರ್ಧನ ರೆಡ್ಡಿ ಆಪ್ತ ಅಲಿಖಾನ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರೂ ಕೂಡ ಸಿಸಿಬಿ ವಿಚಾರಣೆಗೆ ಹಾಜರಾಗಿಲ್ಲ. ಅಲಿಖಾನ್ಗೆ ಕೂಡ ಸಿಸಿಬಿ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.