ಬೆಂಗಳೂರು: ಮಳೆಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಭೇಟಿ ನೀಡಿದರು. ಈ ವೇಳೆ ಜೆಸಿ ನಗರದ ನಿವಾಸಿಗಳು ರಾಜಕಾಲುವೆ ಉಕ್ಕಿ ನೀರು ಬಂದಿರೋದ್ರಿಂದ ಆಗಿರೋ ಸಮಸ್ಯೆ ಬಗ್ಗೆ ಸಿಎಂ ಗಮನಕ್ಕೆ ತಂದರು. ಅಲ್ಲದೆ ಹೆಚ್ ಬಿ ಆರ್ ಲೇಔಟ್ ನಲ್ಲಿ ಪ್ರತೀವರ್ಷ ರಾಜಕಾಲುವೆಯಿಂದ ಆಗ್ತಿರುವ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮಹಾಲಕ್ಷ್ಮಿ ಲೇಔಟ್ ನ ಕೆಲ ವಾರ್ಡ್ ಗಳಲ್ಲಿ ನೀರು ನುಗ್ಗಿದ್ದು, ಎರಡು ದಿನಗಳಾದ್ರು ಮನೆ ಕೊಚ್ಚೆ ವಾಸನೆಯಿಂದ ತುಂಬಿದ್ದು, ಮನೆ ವಸ್ತುಗಳನ್ನೆಲ್ಲ ಹೊರಗೆ ಹಾಕಲಾಗಿತ್ತು.
ಬಳಿಕ ಲಗ್ಗೆರೆಯ ರಾಜಕಾಲುವೆ ವೀಕ್ಷಣೆ ಮಾಡಿ, ನಾಗಾವರ ಮೆಟ್ರೋ ನಿಲ್ದಾಣ ಕಾಮಗಾರಿ ವೀಕ್ಷಣೆ ಮಾಡಿದ್ರು. ಮಳೆಯಿಂದಾಗಿ ಕಾಮಗಾರಿಯಲ್ಲಿ ಹಿನ್ನಡೆಯಾಗಿರುವ ಬಗ್ಗೆ ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್ ಗಮನಕ್ಕೆ ತಂದ್ರು. ಇನ್ನು ಹೆಚ್.ಬಿ.ಆರ್ ಲೇಔಟ್ ಗೆ ಭೇಟಿ ನೀಡಿದ ವೇಳೆ ಸಾರ್ವಜನಿಕರು ಗರಂ ಆದ್ರು. ಪ್ರತೀಬಾರಿ ಮಳೆಗೂ ರಾಜಕಾಲುವೆಯಲ್ಲಿ ನೀರು ನಿಲ್ಲುತ್ತೆ. ಹೂಳು ತೆಗೆಯೋದಿಲ್ಲ, ಸಾಕಷ್ಟು ಜನಕ್ಕೆ ಸಮಸ್ಯೆ ಆಗುತ್ತೆ ಅಂತ ಸ್ಥಳೀಯರು ದೂರಿದ್ರು. ಬಳಿಕ ಹೆಬ್ಬಾಳದ ಎಸ್.ಟಿ.ಪಿ (ಕೊಳಚೆ ಸಂಸ್ಕರಣಾ ಘಟಕ)ಗೆ ಭೇಟಿ ನೀಡಿ ಸಿಎಂ ವಾಪಾಸ್ಸಾದರು.
ಇದನ್ನೂ ಓದಿ: WhatsApp Trick: ಈಗ ಟ್ರೈನ್ ರಿಯಲ್ ಟೈಮ್ ಅಪ್ಡೇಟ್ ಅನ್ನು ವಾಟ್ಸಾಪ್ ಮೂಲಕವೂ ತಿಳಿಯಬಹುದು
ನಂತರ ಮಾತನಾಡಿದ ಸಿಎಂ, ಹಿಂದೆಂದೂ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಮಳೆಯಾಗಿರಲಿಲ್ಲ. ಮೇ ತಿಂಗಳ 15 ದಿನದ ಮಳೆ 4-5 ತಾಸಲ್ಲಿ ಸುರಿದಿದೆ ಹೀಗಾಗಿ ಸಮಸ್ಯೆಗಳಾಗಿವೆ ಎಂದರು.ಮಳೆ ಸಮಸ್ಯೆಗೆ ಪರಿಹಾರ ಮಾಡಿದ್ರೂ, ಸಿಟಿ ಬೆಳವಣಿಗೆ ಆಗ್ತಿರುವ ಹಿನ್ನಲೆ ಪ್ರವಾಹದ ಸಮಸ್ಯೆ ಬಗೆಹರಿಯಲು ಸಾಧ್ಯವಾಗಿಲ್ಲ. ವ್ಯಾಲಿಗಳ ಅಭಿವೃದ್ಧಿ ಆಗಬೇಕು. ವೃಷಭಾವತಿ, ಛಲ್ಲಘಟ್ಟ, ಹೆಬ್ಬಾಳ ಮೊದಲಾದ ಆರೇಳು ವ್ಯಾಲಿಗಳ ಸಮಗ್ರ ಅಭಿವೃದ್ಧಿಯಾಗಬೇಕಿದೆ. ಡಿ.ಪಿ.ಆರ್ ಸಿದ್ಧವಾಗಿದೆ. 1600 ಕೋಟಿ ರೂಪಾಯಿ ಪ್ರಥಮ ಹಂತದಲ್ಲಿ ಖರ್ಚು ಮಾಡಲು ಅನುಮೋದನೆ ಮಾಡಲಾಗಿದೆ ಎಂದರು.
400 ಕೋಟಿ ರೂಗಿಂತ ಹೆಚ್ಚು ಹಣವನ್ನು ಹೂಳು ತೆಗೆಯಲು, ಬ್ಲಾಕೇಜ್ ತೆಗೆಯಲು, ರಾಜಕಾಲುವೆಯ ಹಳೇ ಗೋಡೆಗಳ ಮರುನಿರ್ಮಾಣಕ್ಕೆ ಅವುಗಳ ನಿರ್ಮಾಣಕ್ಕೆ ತಿಳಿಸಲಾಗಿದೆ. ತುರ್ತಾಗಿ ಹೂಳು ತೆಗೆಯುವ ಕೆಲಸ ಆಗಬೇಕಿದೆ. ಪ್ರೈಮರಿ ಡ್ರೈನ್ (ಪ್ರಮುಖ ರಾಜಕಾಲುವೆ) ಹೂಳು ತೆಗೆಯಬೇಕಿದೆ.
ಹೆಬಿ.ಆರ್ ಲೇಔಟ್ ನ 2.5 ಕಿ.ಮೀ ರಾಜಕಾಲುವೆಯ ಹೂಳು ತೆಗೆಯಬೇಕು. ವಾರ್ಡ್ ಗಳಲ್ಲಿರುವ ಸೆಕೆಂಡರಿ ಹಾಗೂ ಟರ್ಷ್ಯರಿ ರಾಜಕಾಲುವೆಗಳ ಹೂಳನ್ನೂ ತೆಗೆಯಬೇಕಿದೆ. ಪ್ರಾಥಮಿಕ ರಾಜಕಾಲುವೆಯ ಹೂಳು ತೆಗೆಯಲು ಸರ್ಕಾರ ಅನುದಾನ ಕೊಡಲಿದೆ. ಉಳಿದ ರಾಜಕಾಲುವೆಗಳ ಸ್ವಚ್ಛತೆ ಬಿಬಿಎಂಪಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲು ತಿಳಿಸಲಾಗಿದೆ ಎಂದರು. ಎಸ್.ಟಿ.ಪಿ ಪ್ಲಾಂಟ್ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಮನವಿ ಬಂದಿದೆ. ಜಲಂಮಡಳಿ ಆ ಕೆಲಸ ಪ್ರಾರಂಭ ಮಾಡಲಿದೆ. 60 ಎಮ್ ಎಲ್ ಡಿ ಹೆಚ್ಚುವರಿ ಪ್ಲಾಂಟ್ ಹಾಕಲು ಸೂಚಿಸಲಾಗಿದೆ.
ಇದನ್ನೂ ಓದಿ: ‘ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ’
ಮಹಾಲಕ್ಷ್ಮಿ ಲೇಔಟ್ ನ ಬೆಗ್ಗರ್ಸ್ ಕಾಲೊನಿ ಭಾಗದ ರಾಜಕಾಲುವೆಯ ಹೂಳು ತೆಗೆಯಬೇಕಿದೆ. ವೃಷಭಾವತಿ ಕಾಲುವೆಯಲ್ಲಿರುವ ಹಳೇ ಬ್ರಿಡ್ಜ್ ಗಳು ನೀರನ್ನು ತಡೆಹಿಡಿಯುತ್ತಿವೆ. ಕಲ್ಲಿನ ಸೇತುವೆಗಳನ್ನು ನವೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಮುಖ್ಯ ರಾಜಕಾಲುವೆಯ ಕೆಳಗೆ ಮನೆಕಟ್ಟಿದಾಗ ಸಮಸ್ಯೆ ಆಗುತ್ತದೆ. ಹೊಸಕೆರೆಹಳ್ಳಿಯಲ್ಲೂ ಅದೇ ಸಮಸ್ಯೆಯಾಗಿತ್ತು. ಹಲವಾರು ಕಡೆ ರಾಜಕಾಲುವೆಗಳನ್ನು ತಡೆದು ಅಕ್ರಮವಾಗಿ ಮನೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ತೆರವು ಮಾಡಿ ಕಾಲುವೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕಿದೆ ಎಂದರು.
ಮಳೆನೀರು ನುಗ್ಗಿದ ಮನೆಗಳಿಗೆ 25 ಸಾವಿರ ಪರಿಹಾರ ಹಣ ನೀಡಲು ಇಂದಿನಿಂದಲೇ ಕೊಡಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಒಂದು ವಾರದ ರೇಷನ್ ಕೊಡಲು ಪಾಲಿಕೆಗೆ ತಿಳಿಸಲಾಗಿದೆ ಎಂದರು.
ಇನ್ನು ಬೆಂಗಳೂರಿನ ಬ್ರಾಂಡ್ ಹಾಳಾಗಲಿದೆ ಎಂಬ ಎಸ್ ಎಂಕೃಷ್ಣ ಅವರ ಮಾತಿಗೆ ಪ್ರತಿಕ್ರಿಯಿಸಿ, ಅವರ ಸಲಹೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ತೇವೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರೋದ್ರಿಂದ ಸವಾಲುಗಳು ಹೆಚ್ಚಾಗಿವೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.