ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದಕ್ಕಾಗಿ ಅಲ್ಲಿನ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಗುರಿಯಾಗಿಸಿಕೊಂಡು ಕೆಲವರು ಬಿಜೆಪಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷಗಳು ಸರ್ಕಾರ ರಚಿಸುವ ಹಕ್ಕನ್ನು ಪಡೆಯಲು ಸಾಧ್ಯವಾಗದ ಕಾರಣ ರಾಷ್ಟ್ರಪತಿಗಳ ಆಡಳಿತದಲ್ಲಿರಿಸಲಾಯಿತು. ನವೆಂಬರ್ 12 ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಹಾರಾಷ್ಟ್ರ ರಾಜ್ಯಪಾಲ ಕೋಶಾರಿ ಅವರ ಶಿಫಾರಸಿಗೆ ಸಹಿ ಹಾಕಿದರು.
ಈಗ ಮಹಾರಾಷ್ಟ್ರದಲ್ಲಿ ಕೇಂದ್ರ ಸರ್ಕಾರ ವಿಧಿಸಿದ ರಾಷ್ಟ್ರಪತಿ ಆಡಳಿತ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಮಮತಾ ಬ್ಯಾನರ್ಜೀ 'ಕೆಲವರು ಬಿಜೆಪಿ ಮುಖ ವಾಣಿಯಂತೆ ಕೆಲಸ ಮಾಡುತ್ತಿದ್ದಾರೆ. ನನ್ನ ರಾಜ್ಯದಲ್ಲಿಯೂ ಜನರು ಪರ್ಯಾಯ ಸರ್ಕಾರವನ್ನು ನಡೆಸಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಿದ್ದೀರಿ' ಎಂದು ಗುರುವಾರ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
West Bengal CM Mamata Banerjee on Maharashtra Governor imposes President's rule: There are some people who are working like a BJP mouthpiece. In my state also you have seen people trying to run a parallel govt. pic.twitter.com/xtscmOS6pA
— ANI (@ANI) November 14, 2019
ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಮತ್ತು ಶಿವಸೇನೆ ಅಧಿಕಾರ ಹಂಚಿಕೆ ಬಗ್ಗೆ ತೀವ್ರ ಜಗಳವಾಡಿದವು.105 ಸ್ಥಾನಗಳೊಂದಿಗೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಶಿವಸೇನಾ 56 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನವನ್ನು ಗಳಿಸಿತು. ಆದಾಗ್ಯೂ, ಶಿವಸೇನಾವು 50:50 ಸೂತ್ರದ ಅಡಿಯಲ್ಲಿ ಮತ್ತು 2.5 ವರ್ಷಗಳ ಕಾಲ ಸಿಎಂ ಹುದ್ದೆ ನೀಡುವಂತೆ ಬಿಜೆಪಿಯನ್ನು ಒತ್ತಾಯಿಸಿತು. ಆದರೆ ಬಿಜೆಪಿ ಇದನ್ನು ಅಲ್ಲಗಳೆದು ಅಂತಹ ಯಾವುದೇ ಚುನಾವಣಾ ಪೂರ್ವ ಮೈತ್ರಿ ಭರವಸೆ ಇಲ್ಲ ಮತ್ತು ದೇವೇಂದ್ರ ಫಡ್ನವಿಸ್ 5 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಬಿಜೆಪಿ ಹೇಳಿತು.
ಈ ಹಿನ್ನಲೆಯಲ್ಲಿ ಶಿವಸೇನಾ ಮತ್ತು ಬಿಜೆಪಿ ನಡುವೆ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಒಮ್ಮತ ಮೂಡದ ಹಿನ್ನಲೆಯಲ್ಲಿ ಅಂತಿಮವಾಗಿ ಮೈತ್ರಿ ಮುರಿದು ಬಿತ್ತು. ಇದಾದ ಬೆನ್ನಲ್ಲೇ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದರೂ ಬಿಜೆಪಿ ರಾಜ್ಯಪಾಲರ ಅಹ್ವಾನವನ್ನು ತಿರಸ್ಕರಿಸುವ ಮೂಲಕ ಮಹಾರಾಷ್ಟ್ರ ರಾಜಕೀಯವನ್ನು ಅನಿಶ್ಚಿತತೆಗೆ ದೂಡಿತು.