ನವ ದೆಹಲಿ: ಪ್ರದ್ಯುಮನ್ ಹತ್ಯೆ ಪ್ರಕರಣದಲ್ಲಿ ಸಿಬಿಐ ವಶಕ್ಕೆ ತೆಗೆದುಕೊಂಡಿರುವ ಬಾಲಕ ಪರೀಕ್ಷೆ ತಪ್ಪಿಸಲು ಹಾಗೂ ಪೋಷಕರು-ಶಿಕ್ಷಕರ ಮೀಟಿಂಗ್ ಮುಂದೂಡುವ ಸಲುವಾಗಿ ತಾನೇ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಈ ಮೊದಲು 11ನೇ ತರಗತಿಯ ಬಾಲಕ ಆಘಾತದಲ್ಲಿ ತಾನೇ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ ಎಂದು ನಂಬಲಾಗಿತ್ತು. ಆದರೆ, ಸಿಬಿಐ ಮೂಲಗಳ ಪ್ರಕಾರ ಈ ವಿದ್ಯಾರ್ಥಿಯು ಪರೀಕ್ಷೆಯನ್ನು ರದ್ದುಗೊಳಿಸಲು ಮತ್ತು ಪಿಟಿಎಂನ ದಿನಾಂಕವನ್ನು ಮುಂದೂಡಲು ಬಯಸಿದ್ದನು. ಆದ್ದರಿಂದ ಪ್ರದ್ಯುಮನ್ ಹತ್ಯೆಯಾದ ದಿನ (ಸೆ.8) ಈ ವಿದ್ಯಾರ್ಥಿ ಶಾಲೆಗೆ ಒಂದು ಚಾಕುವನ್ನು ತೆಗೆದುಕೊಂಡು ಹೋಗಿದ್ದನು. ಪ್ರದ್ಯುಮನ್ ಅನ್ನು ಕೊಲೆ ಮಾಡಿದ ನಂತರ ಟಾಯ್ಲೆಟ್ ಫ್ಲಶ್ ನಲ್ಲಿ ಹಾಕಿದ್ದನು ಎಂದು ತಿಳಿಸಿದ್ದಾರೆ.
ಸಿಬಿಐ ಮೂಲಗಳ ಪ್ರಕಾರ, ಈ ಕೊಲೆಯು ಪೂರ್ವ ಯೋಜಿತವಾಗಿರಲಿಲ್ಲ. ಆದರೆ ಪರೀಕ್ಷೆ ರದ್ದುಗೊಳಿಸುವ ಉದ್ದೇಶದಿಂದ 2ನೇ ತರಗತಿಯ ಪ್ರದ್ಯುಮ್ನನನ್ನು ಕೊಲೆಗೈದಿದ್ದಾನೆ. ಈ ಎಲ್ಲಾ ಘಟನೆಯನ್ನು ಸಿಸಿಟಿವಿ ಯಿಂದ ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ. ಈ ವಿದ್ಯಾರ್ಥಿಯ ಇಬ್ಬರು ಸಹಚರರ ಬಗ್ಗೆ ಮಾಹಿತಿ ಕೂಡ ಇದೆ ಎಂದು ತಿಳಿಸಿರುವ ಸಿಬಿಐ ಅದೇ ಸಮಯದಲ್ಲಿ, ಈ ಕೊಲೆ ಪ್ರಕರಣವು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿಷಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಹರಿಯಾಣದ ಗುರುಗ್ರಾಮ್ ಪೊಲೀಸರು ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ನನ್ನು ಆರೋಪಿ ಎಂದು ನಿರ್ಧರಿಸಿ ಬಂಧಿಸಿದ್ದರು.