ಜಮ್ಮು: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಡರಮ್‌ಡೋರಾ ಕೀಗಂ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಭದ್ರತಾ ಪಡೆಗಳ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ಕು ಭಯೋತ್ಪಾದಕರು ಹತ್ಯೆಯಾಗಿದ್ದಾರೆ.
ಎರಡೂ ಕಡೆಯಿಂದ ಭಾರೀ ಪ್ರಮಾಣದ ಗುಂಡಿನ ಚಕಮಕಿ ನಂತರ ನಾಲ್ವರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಇತರ ಭಯೋತ್ಪಾದಕರು ಇರುವುದನ್ನು ಕಂಡುಹಿಡಿಯಲು ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಅಲ್ಲದೆ ಈಗ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ನಾಲ್ಕು ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಅವರ ಸಂಬಂಧವನ್ನು ಪತ್ತೆ ಹಚ್ಚುವ ಕಾರ್ಯವನ್ನು ಭದ್ರತಾ ಪಡೆಗಳು ನಡೆಸಿವೆ ಎನ್ನಲಾಗಿದೆ.
Shopian encounter #UPDATE: A total of four terrorists have been killed by security forces.Arms and ammunition recovered. Operation continues #jammukashmir pic.twitter.com/YlAGpCVbPO
— ANI (@ANI) June 23, 2019
ನಾಲ್ವರು ಉಗ್ರರನ್ನು ಹತ್ಯೆಗೈದ ನಂತರ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು 'ಎನ್ಕೌಂಟರ್ನಲ್ಲಿ ನಾಲ್ಕು ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಅವರ ಶವಗಳನ್ನು ಎನ್ಕೌಂಟರ್ ಸ್ಥಳದಿಂದ ಪಡೆಯಲಾಗಿದೆ. ಈಗ ಹತ್ಯೆಯಾಗಿರುವ ಭಯೋತ್ಪಾದಕರ ಗುರುತುಗಳು ಮತ್ತು ಉಗ್ರ ಸಂಘಟನೆಗಳೊಂದಿಗೆ ಅವರು ಹೊಂದಿರುವ ನಂಟಿನ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ' ಎಂದು ಜೆ & ಕೆ ಪೊಲೀಸ್ ರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ಹಲವು ವಸ್ತುಗಳನ್ನು ಸಹ ಎನ್ಕೌಂಟರ್ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ' ಎಂದು ಅದು ಹೇಳಿದೆ. ಇದೇ ವೇಳೆ ಪೊಲೀಸರು ಈ ವಿಚಾರವಾಗಿ ಪ್ರಕರಣವನ್ನು ದಾಖಲಿಸಿದ್ದು, ಕಾರ್ಯಾಚರಣೆ ಪ್ರದೇಶವಾಗಿರುವ ಎನ್ಕೌಂಟರ್ ವಲಯದೊಳಗೆ ಹೋಗಬೇಡಿ ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಮೂರರಿಂದ ನಾಲ್ಕು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ಈ ಪ್ರದೇಶದಲ್ಲಿ ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಅನುಸರಿಸಿ ಭಯೋತ್ಪಾದಕರ ವಿರುದ್ಧದ ಜಂಟಿ ಕಾರ್ಯಾಚರಣೆಯನ್ನು 33 ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಪ್ರಾರಂಭಿಸಿತ್ತು.