ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಹಲವು ಸಂಘಟನೆಗಳು ಹಮ್ಮಿಕೊಂಡಿರುವ ಎರಡು ದಿನಗಳ ಭಾರತ್ ಬಂದ್ ಗೆ ಕನ್ನಡ ಚಿತ್ರರಂಗ ನೈತಿಕ ಬೆಂಬಲ ವ್ಯಕ್ತಪಡಿಸಿದೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ಫಿಲ್ಮ್ ಛೇಂಬರ್ ಅಧ್ಯಕ್ಷ ಚಿನ್ನೇಗೌಡರು, ನಾಳೆ ಮತ್ತು ನಾಡಿದ್ದು ಸಿನಿಮಾ ಪ್ರದರ್ಶನ ಹಾಗೂ ಚಲನಚಿತ್ರ ಚಟುವಟಿಕೆಗಳು ಎಂದಿನಂತೆ ನಡೆಯುತ್ತವೆ. ನಮಗೆ ಇಲ್ಲಿಯವರೆಗೂ ಯಾರು ಬೆಂಬಲ ನೀಡಿ ಎಂದು ಮನವಿ ಮಾಡಿಲ್ಲ. ಕಾರ್ಮಿಕರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ನೈತಿಕ ಬೆಂಬಲ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಹೀಗಾಗಿ ಕಪ್ಪು ಪಟ್ಟಿ ಹಿಡಿದುಕೊಳ್ಳುವ ಮೂಲಕ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಈಗಾಗಲೇ ಬಂದ್ ಹಿನ್ನೆಲೆಯಲ್ಲಿ ಹಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕಾರ್ಮಿಕ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.