ಬಾಗಲಕೋಟೆ : ಭಾರಿ ಚರ್ಚೆಗೆ ಗ್ರಾಸವಾಗಿದ್ದ, ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಸಿದ್ದರಾಮಯ್ಯ ಸಿ.ಎಂ.ಇಬ್ರಾಹಿಂ, ಎಸ್.ಆರ್.ಪಾಟೀಲ್, ಸಚಿವ ತಿಮ್ಮಾಪುರ, ಹೆಚ್.ಕೆ. ಪಾಟೀಲ್, ಚಿಮ್ಮನಕಟ್ಟಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್ ಶೋ ನಡೆಸಿದರು. ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಲು ಬರುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಬಾದಾಮಿ ಪಟ್ಟಣದ ತುಂಬಾ ಕಾಂಗ್ರೆಸ್ ಬೆಂಬಲಿಗರು ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕೂಗಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ನಾನು ಉತ್ತರ ಕರ್ನಾಟಕ– ನೀನು ದಕ್ಷಿಣ ಕರ್ನಾಟಕ ಎನ್ನೋ ಚರ್ಚೆ ಬಹಳ ಕಾಲದಿಂದ ನಡೀತಿದೆ. ಆದರೆ ನಾನೇನೂ ಕರ್ನಾಟಕಕ್ಕೆ ಹೊಸಬನಲ್ಲ. ಈ ಹಿಂದೆ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಈ ಬಾರಿ ನಾನು ನಿಲ್ಲಬೇಕು ಎಂದು ಈ ಭಾಗದ ಜನರು ಒತ್ತಾಯಿಸಿದ್ದರು. ಅವರೇ ಹೈಕಮಾಂಡ್ ಮೇಲೆಯೂ ಒತ್ತಡ ತಂದಿದ್ದರು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ನಂತರ ಸಿದ್ದರಮಯ್ಯ ಅವರು ಎರಡು ಕಡೆ ಸ್ಪರ್ಧಿಸುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಅವರು, ಈ ಹಿಂದೆ ಪ್ರಧಾನಿ ಮೋದಿ ಅವರು ವಾರಾಣಸಿ, ವಡೋದರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೂ ಸಹ ಎರಡೆರಡು ಕಡೆ ಸ್ಪರ್ಧಿಸಿದ್ದಾರೆ. ಅವೆಲ್ಲಾ ಎರಡು ಕಡೆ ಯಾಕೆ ನಿಂತಿದ್ದರು? ಅವರಿಗೆ ಸೋಲಿನ ಭಯವಿತ್ತೆ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಡೆಗೂ ಹಲವು ಕುತೂಹಲ ಮೂಡಿಸಿದ್ದ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಶ್ರೀರಾಮುಲು, ಜೆಡಿಎಸ್ ಅಭ್ಯರ್ಥಿಯಾಗಿ ಹನುಮಂತಪ್ಪ ಮಾವಿನ ಮರದ್ ಸ್ಪರ್ಧಿಸುತ್ತಿದ್ದಾರೆ.